+91 9449710675 principal.ppvp@gmail.com Nitya Pravachana CMS Login Student Login PPVP Temple PPSM VVSRI PPST Student Corner Our Blog
Img1 Img2

पूर्णप्रज्ञविद्यापीठसंस्कृतमहापाठशाला

कर्नाटक-संस्कृत-विश्वविद्यालयात् मान्यता प्राप्ता

जगद्गुरु श्रीमन्मध्वाचार्य मूलमहासंस्थानम्

श्री पेजावर अदोक्षज मठ:, उडुपि

Img3 Img4

Our Glorious History

History Image 1

ಶ್ರೀವಿದ್ಯಾಮಾನ್ಯತೀರ್ಥರ ಮತ್ತು ವಿಶ್ವೇಶತೀರ್ಥರ ಅವಿರತಪರಿಶ್ರಮವೇ ಸಂಸ್ಥೆಯ ಜೀವಾಳ, ಇಬ್ಬರೂ ಬೆಂಗಳೂರಿನ ಆಸ್ತಿಕರ ಮನೆ ಮನೆಗಳಿಗೆ ಹೋಗಿ ಸಹಾಯ ಕೇಳುತ್ತಿದ್ದರು. ಜನ ತಾವು ತಿನ್ನುವ ಅಕ್ಕಿ, ಬೇಳೆಗಳಲ್ಲಿ ಒಂದು ಹಿಡಿ ಎತ್ತಿಡಬೇಕು. ವಾರಕ್ಕೊಮ್ಮೆ ಅದನ್ನು ಸಂಗ್ರಹಿಸಿ ತರುವ ಏರ್ಪಾಡು. ನಿತ್ಯ ಅನ್ನದಾನ ಯೋಜನೆಯ ಹೆಸರಿನಲ್ಲಿ ನಡೆಯುತ್ತಿದ್ದ ಈ ವ್ಯವಸ್ಥೆಯೇ ಸಂಸ್ಥೆಯ ಜೀವಾಳ. ದಿನಕ್ಕೆ 25ರೂ ನೀಡಿದರೆ ಅವರ ಹೆಸರಿನಲ್ಲಿ ಸಂತರ್ಪಣೆ; 500ರೂ ಮೂಲಧನವಿಟ್ಟವರ ಹೆಸರಿನಲ್ಲಿ ಅದರ ಬಡ್ಡಿಯಿಂದ ವರ್ಷಕ್ಕೊಮ್ಮೆ ವಿದ್ಯಾರ್ಥಿಗಳ ಅನ್ನ ಸಂತರ್ಪಣೆ. ಇಷ್ಟಾದರೂ ಸಂಸ್ಥೆ ಕೊರತೆಯಲ್ಲೇ ನಡೆಯುತ್ತಿತ್ತು. ಕ್ರಿ.ಶ. 1968ರ ಶ್ರೀಗಳವರ ಪರ್ಯಾಯ ಕಾಲ. 1967ರಲ್ಲಿ ವಿದ್ಯಾಪೀಠ ಸಾರ್ವಜನಿಕರಲ್ಲಿ ಹೀಗೆ ಮನವಿ ಮಾಡಿತ್ತು “ವಿದ್ಯಾಪೀಠವು ಇದುವರೆಗೂ ಸ್ವಾಮಿಗಳು ಸಂಚಾರಕಾಲದಲ್ಲಿ ಸಂಗ್ರಹಿಸುತ್ತಿದ್ದ ಕೊಡುಗೆ, ಸ್ವಾಮಿಗಳ ಮಠದಿಂದ ಬರುತ್ತಿದ್ದ ಸಹಸ್ರಾರು ರೂಪಾಯಿಗಳ ನೆರವುಗಳಿಂದ ನಡೆದು ಬರುತ್ತಿತ್ತು, ಸ್ವಾಮಿಗಳೂ ತಮ್ಮ ಮಠದಿಂದ ಖೋತಾ ತುಂಬಿಸಲು ಏಳೆಂಟುಸಹಸ್ರರೂಪಾಯಿಗಳವರೆಗೂ (ತಿಂಗಳಿಗೆ) ಕೊಡುತ್ತ ಬರುತ್ತಿದ್ದರು. ಈಗ ಈ ಹೊರೆಯನ್ನು ಸಮಾಜದ ಆಸ್ತಿಕ ಮಹಾಶಯರು ಹೊರಲು ಮುಂದೆ ಬರಬೇಕಾಗಿದೆ. ಬೆಲೆಗಳು ಮುಗಿಲು ಮುಟ್ಟಿರುವ ಈ ದುಷ್ಕಾಲದಲ್ಲಿ ವಾರ್ಷಿಕ ಬೆಳೆ ಬೆಳೆಯುತ್ತಿರುವ ನಮ್ಮ ಸಮಾಜಬಾಂಧವರು ವಿದ್ಯಾಪೀಠದಲ್ಲಿ ಒಂದು ದಿನಕ್ಕೆ ಬೇಕಾಗಿರುವ ಮೂವತ್ತು ಸೇರು ಅಕ್ಕಿಯನ್ನು ಸ್ವಯಂಪ್ರೇರಣೆಯಿಂದ ನೀಡಿದರೆ ಪುಣ್ಯಭಾಗಿಗಳಾಗುವರು''.

History Image 2

- 1970ರ ವಾರ್ಷಿಕೋತ್ಸವದಲ್ಲಿ ಶ್ರೀಗಳವರು ಮತ್ತೆ ಹೀಗೆ ಹೇಳಿದರು - 'ಭಾಗವತದಲ್ಲಿ ಸತ್ಯವ್ರತರಾಜನ ಕಥೆ ಹೀಗಿದೆ. ಅವನ ಬೊಗಸೆಯಲ್ಲಿ ಒಂದು ಚಿಕ್ಕ ಮೀನು ಬಂತು. ಅದರ ಪ್ರಾರ್ಥನೆಯಂತೆ ಅದನ್ನು ಪಾತ್ರೆಯ ನೀರಿನಲ್ಲಿ ಹಾಕಿದ. ಮರುದಿನ ಅದು ತುಂಬುವಷ್ಟು ಮೀನು ಬೆಳೆದಿತ್ತು ಸರೋವರದಲ್ಲಿ ಬಿಟ್ಟ ಅಲ್ಲೂ ಬೆಳೆಯಿತು. ಸಮುದ್ರದಲ್ಲಿಹಾಕಿದ. ಅಲ್ಲೂ ನಿರಾತಂಕವಾಗಿ ಬೆಳೆಯಿತು. ಈ ವಿದ್ಯಾಪೀಠವೂ ಒಂದು ಮತ್ಸ್ಯಾಕೃತಿ. ಎಷ್ಟು ಹಾಕಿದರೂ ಮತ್ತಷ್ಟು ಬೇಕೆನ್ನುತ್ತದೆ. ಇದನ್ನು ಜನತಾಸಮುದ್ರದಲ್ಲಿ ನಾವು ಬಿಟ್ಟಿದ್ದೇವೆ. ಅದರ ರಕ್ಷಣೆಯ ಭಾರ ಅಭಿಮಾನಿಗಳದ್ದು", ಹೀಗೆ ಜನತೆಯ ಮೇಲೆಯೇ ಆಧರಿಸಿರುವ ಸಂಸ್ಥೆ ಇದು. ಪಿಗ್ನಿ ಯೋಜನೆ, ಒಬ್ಬ ವಿದ್ಯಾರ್ಥಿಯ ದತ್ತು ಯೋಜನೆ ಹೀಗೆ ಹೊಸ ಹೊಸ ಯೋಜನೆಗಳನ್ನು ಜನತೆಯ ಮುಂದಿಟ್ಟು ಶ್ರೀಗಳವರು ಸಂಸ್ಥೆಯನ್ನು ಬೆಳೆಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯ ಜೊತೆಗೆ ಇತರ ಸೌಕರ್ಯಗಳೂ ಬೆಳೆಯುವುದು ಅನಿವಾರ್ಯ. ಆರಂಭದಲ್ಲಿ ಮೂರೂ ಮುಕ್ಕಾಲು ಎಕರೆಯ ವಿಸ್ತೀರ್ಣದಲ್ಲಿ ಇದ್ದ ಕಟ್ಟಡಗಳು ಎರಡು. 17 ಕೋಣೆಗಳ ವಿದ್ಯಾರ್ಥಿನಿಲಯ ಮತ್ತು ಚಿಕ್ಕದಾದ ಪಾಕಶಾಲೆ. 1958ರಲ್ಲಿ ಗ್ರಂಥಾಲಯ, ಕಾರ್ಯಾಲಯಕ್ಕಾಗಿ ಒಂದು ಭವನ ನಿರ್ಮಾಣವಾಯಿತು. 1970ರಲ್ಲಿ ಪೂಜಾಮಂದಿರ, ಮುಂದೆ ಪಾಠಶಾಲೆ, ವಿದ್ಯಾರ್ಥಿನಿಲಯದ ವಿಸ್ತರಣೆ, ಹೊಸ ವಿದ್ಯಾರ್ಥಿನಿಲಯ ಹೀಗೆ ಬೆಳೆಯಿತು. 1983ರಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಾಣಗೊಂಡು ಯಾಜ್ಞಕವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರವಾಗಿ ಉಪಕರಿಸಿತು. ವಿದ್ಯಾರ್ಥಿಗಳ ವಸತಿಗಾಗಿ ನಿರ್ಮಿಸಿದ್ದ 35 ಕೊಠಡಿಗಳ ವಿದ್ಯಾರ್ಥಿನಿಲಯ ಮತ್ತು ಭೋಜನಶಾಲೆಗಳನ್ನು ಶಿಥಿಲವಾಗಿದ್ದರಿಂದ ನೆಲಸಮಗೊಳಿಸಲಾಗಿದೆ. ನೂತನ ಭವನದ ನಿರ್ಮಾಣಕಾರ್ಯ ಆರಂಭವಾಗಿದೆ. ಸುಮಾರು 12ಸಾವಿರದಷ್ಟು ಅಪೂರ್ವ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವನ್ನು ಸಂಸ್ಥೆ ಹೊಂದಿರುತ್ತದೆ. 46 ಕೊಠಡಿಗಳ ಮಹಾಪಾಠಶಾಲೆ ತಲೆ ಎತ್ತಿ ನಿಂತಿದೆ.

History Image 3

ಇಂದಿನ ವೈಜ್ಞಾನಿಕಪ್ರಪಂಚ ವೃತ್ರಾಸುರನಂತೆ ದಿನದಿನಕ್ಕೂ ಬೆಳೆಯುತ್ತಿದೆ. ಅದರ ಆಕರ್ಷಣೆಗೆ ಮಾರುಹೋಗುವ ವಿದ್ಯಾರ್ಥಿಗಳಿಗೆ ಆರ್ಷಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಆಸಕ್ತಿ ಕುಸಿಯುತ್ತಿದೆ. ಹೀಗಾಗಿ ಕುಸಿಯುತ್ತಿರುವ ಮೌಲ್ಯಗಳ ರಕ್ಷಣೆಗಾಗಿ ಶ್ರೀಗಳವರು ಕಟಿಬದ್ಧರಾಗಿದ್ದಾರೆ. ತಮ್ಮ ನಿರಂತರ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಪ್ರತಿವರ್ಷ ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳಿಗೂ ಮೌಖಿಕಪರೀಕ್ಷೆಯನ್ನು ನಡೆಸುತಾರೆ. ಚಿಕ್ಕಪುಟ್ಟ ವಿಷಯಗಳನ್ನೂ ಸಹನೆಯಿಂದ ಕೇಳುತ್ತಾರೆ.

History Image 4

ಶ್ರೀ ವಿಶ್ವೇಶತೀರ್ಥಶ್ರೀಪಾದರು ಮಠಾಧೀಶರಾಗಿ ಅವಶ್ಯಪೂರೈಸಬೇಕಾದ ಒಂದು ದೊಡ್ಡ ಹೊಣೆಗಾರಿಕೆಯನ್ನು ವಿದ್ಯಾಪೀಠದ ಮೂಲಕ ಪೂರೈಸಿದ್ದಾರೆ. ಇಂದು ಪರಿಣತವಿದ್ವಾಂಸರು ಇಲ್ಲಿಂದ ಹೊರಬಂದಿದ್ದಾರೆ. ಚರ್ಚಾಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಅವರ ಪಾತ್ರ ಎಲ್ಲರ ಗಮನ ಸೆಳೆಯುವಂತಾಗಿದೆ. ನಿವೃತ್ತಿ ಹೊಂದಿದ ಅನೇಕ ಲೌಕಿಕರೂ ಬೆಳಿಗ್ಗೆ ಸಾಯಂಕಾಲಗಳಲ್ಲಿ ಶಾಸ್ತ್ರಪಾಠಕ್ಕೆ ಸಂಸ್ಥೆಯನ್ನವಲಂಬಿಸಿದ್ದಾರೆ. ಪ್ರತಿದಿನ ಸಂಜೆ ಧಾರ್ಮಿಕ ಪ್ರವಚನ ನಡೆಯುತ್ತಿದೆ. ಹೀಗೆ ಆಸ್ತಿಕ ಸಮಾಜದ ಅವಿಭಾಜ್ಯ ಅಂಗವಾಗಿದೆ ಈ ಸಂಸ್ಥೆ. ಹಿರಿಯ ಶ್ರೀಗಳವರು ಹುಟ್ಟು ಹಾಕಿ ಬೆಳೆಸಿದ ಈ ಕಲ್ಪವೃಕ್ಷ ಫಲಪುಷ್ಪಭರಿತವಾಗಿ ಹತ್ತಾರು ವರ್ಷಗಳವರೆಗೆ ಸಮಾಜಕ್ಕೆ ತತ್ತ್ವಜ್ಞಾನದ ಸವಿಯನ್ನು ನೀಡುವ ರಸಮಯ ಫಲಗಳನ್ನು ನೀಡುತ್ತಿದೆ. ನೂರಾರು ಹಕ್ಕಿಗಳು ಅದರಲ್ಲಿ ಗೂಡುಕಟ್ಟಿ ಕೂತಿವೆ. ಅದಕ್ಕೆ ನೀರೆರೆದು ಪೋಷಿಸುವ ಜವಾಬ್ದಾರಿ ಸಂಸ್ಥೆಯ ಅಧಿಕಾರಿವರ್ಗ ಹಾಗೂ ಅಭಿಮಾನಿ ಜನತೆಯ ಮೇಲಿದೆ.

History Image 4

ಈಗ ಇದರ ಚುಕ್ಕಾಣಿಯನ್ನು ಶ್ರೀವಿಶ್ವಪ್ರಸನ್ನತೀರ್ಥರು ಸಮರ್ಥವಾಗಿ ಹಿಡಿದು ಮುನ್ನಡೆಸುತ್ತಿದ್ದಾರೆ. ಆಲದ ಮರದ ಕೆಳಗೆ ಬೇರೆ ಗಿಡ ಬೆಳೆಯುವುದಿಲ್ಲ. ಆದರೆ, ಶ್ರೀವಿಶ್ವೇಶತೀರ್ಥರಂತಹ ಐತಿಹಾಸಿಕ ವ್ಯಕ್ತಿಯ ಶಿಷ್ಯರಾಗಿ ಶ್ರೀವಿಶ್ವಪ್ರಸನ್ನತೀರ್ಥರು ಗುರುಗಳು ಆರಂಭಿಸಿದ ಕಾರ್ಯಕ್ರಮಗಳಲ್ಲಿ ಯಾವೊಂದನ್ನೂ ಬಿಡದೆ, ದೇಶ-ಕಾಲಗಳಿಗೆ ತಕ್ಕಂತೆ ಅವುಗಳಿಗೆ ಪರಿಷ್ಕಾರಗಳನ್ನು ಮಾಡಿಕೊಂಡು ತಮ್ಮ ಛಾಪನ್ನು ಒತ್ತುತ್ತಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹೊಸ ಮುಖಗಳನ್ನು ನೀಡುತ್ತಿದ್ದಾರೆ. ಅವರಿಗೆ ತನು-ಮನ-ಧನಗಳಿಂದ ಸಹಕಾರ ನೀಡುವುದು ಸನಾತನಧರ್ಮದ ಎಲ್ಲ ಶ್ರದ್ಧಾಳುಗಳ ಕರ್ತವ್ಯವಾಗಿದೆ.